ಕಸ್ತೂರಿ ಇಲಿ

 ಕ್ರಿಸೆಟಿಡೀ ಕುಟುಂಬಕ್ಕೆ ಸೇರಿದ, ಇಲಿಯಂತೆಯೇ ಕಾಣುವ ಅರೆಜಲಚರ ದಂಶಕ (ಮಸ್ಕ್ ರ್ಯಾಟ್).  ಈ ಇಲಿಯ ಆಸನದ್ವಾರದ ಬಳಿಯಿರುವ ಒಂದು ಜೊತೆ ಗ್ರಂಥಿಗಳಿಂದ ಉಂಟಾಗುವ ಸುಗಂಧಯುಕ್ತ ವಾಸನೆಯ ಸ್ರಾವದಿಂದಾಗಿ ಇದಕ್ಕೆ ಈ ಹೆಸರು. ಮೈಕ್ರೊಟಿನೀ ಇಂಥ ಇಲಿಗಳ ಉಪಕುಟುಂಬದ ಹೆಸರು.  ನೀರಿಲಿಗಳು, ಹೊಲದ ಇಲಿಗಳು ಮತ್ತು ಲೆಮಿಂಗುಗಳು ಈ ಉಪಕುಟುಂಬಕ್ಕೆ ಸೇರುತ್ತವೆ.  ಮರ ಬೆಳೆಯದ ತಂಡ್ರ ಪ್ರದೇಶಗಳನ್ನುಳಿದು ಉತ್ತರ ಅಮೆರಿಕದ ಎಲ್ಲ ಕಡೆಗಳಲ್ಲೂ ಕಸ್ತೂರಿ ಇಲಿಗಳು ಕಾಣಸಿಗುತ್ತವೆ.  ಯೂರೋಪಿನಲ್ಲೂ ಇವು ವ್ಯಾಪಿಸಿಕೊಂಡಿವೆ.  ಕಸ್ತೂರಿ ಇಲಿಯ ಉದ್ದ ಸುಮಾರು (12"). ಪಾಶ್ರ್ವಗಳು ಅದುಮಿದಂತಿವೆ. ಚಕ್ಕೆಚಕ್ಕೆಯಾಗಿರುವ ಇದರ ಬಾಲದಲ್ಲಿ ಕೂದಲುಗಳಿಲ್ಲ.  ದೇಹ ಅಡಕವೂ ತೂಕವುಳ್ಳದ್ದೂ ಆಗಿದೆ.  ದೇಹಕ್ಕೆ ಹೋಲಿಸುವಾಗ ಬಾಲ ಚಿಕ್ಕದು. ಕಿವಿಗಳು ದುಂಡಗೆ ಇದ್ದು ಮೈಗೂದಲಿಂದಾಚೆಗೆ ಚಾಚಿರುತ್ತವೆ. ಹಿಂಗಾಲಿನಲ್ಲಿ ಐದು ಬೆರಳುಗಳು ; ಬೆರಳುಗಳ ನಡುವೆ ಇರುವ ಅರೆಜಾಲಗಳು ಬಿರುಗೂದಲುಗಳಿಂದ ಹೆಣೆದುಕೊಂಡಿರುತ್ತವೆ.

 ಇಲಿಗೆ ನೀರಿನಲ್ಲಿ ಈಜಲು ಅರೆಜಾಲಗಳು ಸಹಾಯಕಾರಿ. ಇಲಿಯ ದೇಹದ ಬಣ್ಣ ಕಪ್ಪು ಮಿಶ್ರಿತ ಕಂದು. ಕಾಲುಗಳು ಕಪ್ಪು ಬಣ್ಣದವು.  ಮೈಮೇಲೆಲ್ಲ ದಟ್ಟವಾದ, ಹೊಳೆಯುವ, ಮೃದುವಾಗಿರುವ ಉದ್ದನೆಯ ಕೂದಲುಗಳಿವೆ. ತುಪ್ಪಳ ಹೊದಿಕೆಯನ್ನು ಮಾಡುವ ಉದ್ಯಮದಲ್ಲಿ ಕಸ್ತೂರಿ ಇಲಿಯ ಚರ್ಮವೇ ಕಚ್ಚಾವಸ್ತು. ಆದ್ದರಿಂದ ಅದಕ್ಕೆ ಅಧಿಕ ಬೇಡಿಕೆ ಇದೆ. ಉತ್ತರ ಅಮೆರಿಕದಲ್ಲಿ ಉತ್ಪತ್ತಿಯಾಗುವ ಇತರ ಯಾವುದೇ ತುಪ್ಪಳಕ್ಕಿಂತ ಕಸ್ತೂರಿ ಇಲಿಯ ತುಪ್ಪಳ ಅಧಿಕ ವರಮಾನ ನೀಡುತ್ತಿದೆ. ಕುಂಟೆ, ಕೆರೆ, ತೊರೆ ಮುಂತಾದೆಡೆಗಳ ದಡದ ಮೇಲೆ ಬಿಲ ಮಾಡಿಕೊಂಡು ಅದರೊಳಗೆ ವಾಸಿಸುತ್ತದೆ. ಜವುಗು ಸಸ್ಯ, ಜಲಸಸ್ಯಗಳ ಬೇರುಗಳು, ಕೆಲವು ವೇಳೆ ಹಲವು ಜಾತಿಯ ಇಚ್ಚಿಪ್ಪಿನ ಪ್ರಾಣಿಗಳು, ಮುಳ್ಳುನಳ್ಳಿಗಳು, ಬೆಂಕಿ ಮೊಸಳೆಗಳು (ಸ್ಯಾಲಮ್ಯಂಡರ್ಸ್) ಮತ್ತು ಚಿಕ್ಕ ಚಿಕ್ಕ ಮೀನುಗಳು-ಇವೇ ಈ ಇಲಿಯ ಆಹಾರ. ಚಪ್ಪಟೆಯಾದ ಬಂಡೆಯ ಮೇಲೋ ಅಥವಾ ಕಡಿದು ಹಾಕಿರುವ ಜವುಗು ಸಸ್ಯದ ಮೇಲೋ ವರ್ಷಕ್ಕೆ ಒಂದು ಅಥವಾ ಎರಡು ಸೂಲಿನಂತೆ ಇವು ಮರಿಗಳನ್ನು ಹಾಕುತ್ತವೆ. ಮರಿಗಳ ಸಂಖ್ಯೆ ಒಂದೊಂದು ಸೂಲಿಗೂ ಒಂದರಿಂದ ಹನ್ನೊಂದು. 

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ